|| ಬರ್ತಡೇ ||
ಹುಟ್ಟಿದ ದಿನವೆಂದರೆ ಅದೆಷ್ಟು ಸಂಭ್ರಮ. ಬಾಕಿ ದಿನಗಳಿಗೆ ಹುಟ್ಟಿದ ದಿನದಷ್ಟೇ ಹೊಸತನ ಏಕೆ ಮೂಡಿಸಬಾರದು? ಒಂದು ದಿನ ಸಿಹಿಕೇಕು ತಿಂದು ವರ್ಷಪೂರ್ತಿಯ ಕಹಿ ಮರೆಯಲಾದೀತೆ?
|| ಬರ್ತಡೇ ||
ಹುಟ್ಟಿದ ದಿನವೆಂದರೆ ಸಾಕು
ಅದೆಷ್ಟು ಮಹತ್ವ ಎಲ್ಲರಿಗೂ
ಇಂದಿನ ದಿನವಲ್ಲವೇ ನಾನು
ಗುರುತಾಗಿದ್ದು ಎಲ್ಲರಿಗೂ
ವರ್ಷಪೂರ್ತಿ ಕಹಿಮನಸು
ಕೇಕಿನಿಂದ ಸಿಹಿಯಾಗುವುದೇ
ಹರಿದುಹೋದ ಸಂಬಂಧಗಳು
ಪಾರ್ಟಿಯಲ್ಲಿ ಜೊತೆಗೂಡುವವೇ
ವರ್ಷಪೂರ್ತಿ ಏನೂ ಸಾಧನೆ
ನಾ ಮಾಡಲಿಲ್ಲ ಎಂಬ ವ್ಯಥೆಯೆ
ಎಲ್ಲರೊಂದಿಗೆ ಮೈಮರೆತು
ಮುಂದಿನ ವರುಷಕೆ ಕಾಲಿಡುವುದೇ
ನಮ್ಮದೂ ಎಷ್ಟೋ ಅವತಾರ
ಕೆಲವೊಂದೇ ವರ್ಷಗಳಲ್ಲಿಯೇ
ದೇವರಂತೆಯೇ ಸಮಾಪ್ತಿಯು
ಕಾರ್ಯ ಸಿದ್ಧಿಸಿದೊಡನೆಯೇ
ನಮ್ಮ ಹುಟ್ಟಿದ ದಿನ ನಮಗೆ
ನೆನಪಿಲ್ಲದಿದ್ದರೂ ನಡೆದೀತು
ಪರಿವಾರದವರ ದಿನ ಮರೆತರೆ
ಕೋಪ ರಗಳೆ ನಿಮಗೆ ಕಾದೀತು
ತೊಂಭತ್ತು ದಾಟಿದರೇನು ಇನ್ನು
ಹುಟ್ಟಿದ ಹಬ್ಬ ಆಚರಿಸುವುದೇ
ಸತ್ತ ಮೇಲೆ ನೀ ಚಿಂತಿಸಬೇಡ
ಶ್ರಾದ್ಧದ ಆಚರಣೆಯು ನಿನಗಿದೆ
ಹುಟ್ಟಿದ ದಿನವು ಪ್ರತಿವರ್ಷವೂ
ಒಂದು ದಿನಕೆ ಖುಷಿ ತಂದಿತು
ಪೂರ್ತಿ ವರುಷವೆಲ್ಲ ಗೊತ್ತಿಲ್ಲವೇ
ಅದು ಹೇಗೇಗೋ ಕಳೆದಾಯಿತು
ನೀನಿರುವಾಗ ಹುಟ್ಟಿದ ದಿನ
ಪ್ರತಿದಿನವೂ ಆಚರಿಸುತ ಬಂದೆ
ಸತ್ತ ಮೇಲೆ ಹುಟ್ಟಿದ ದಿನ
ಆಚರಿಸಲು ಮಹಾತ್ಮನಾದರೆ ಸಾಧ್ಯವಿದೆ
ಪ್ರತಿದಿನವೂ ಹೊಸಬೆಳಕಿನೊಂದಿಗೆ
ನಿನ್ನ ಹುಟ್ಟು ನಿಜಕ್ಕೂ ಸಾಧ್ಯವಿದೆ
ಹೊಸ ವಿಚಾರ ಹೊಸ ವ್ಯಕ್ತಿತ್ವವು
ಮನಸ್ಸು ಮಾಡಿದರೆ ಸಾಧ್ಯವಿದೆ
ಹುಟ್ಟು ಸಾವುಗಳ ವ್ಯಾಪವೇಕೆ
ಹುಟ್ಟಿಸು ಹೊಸತನ ಪ್ರತಿಕ್ಷಣಕೆ
ಇರುವಾಗಲಾದರೂ ಪ್ರತಿದಿನವ
ಹುಟ್ಟಿದ ಹಬ್ಬದಂತೆಯೇ ಸಂಭ್ರಮಿಸು
ರಚನೆ ಅಚ್ಯುತ ಕುಲಕರ್ಣಿ
Comments
Post a Comment