ಶ್ರೀ ಗುರುರಾಯರ 916 ನೇ ಭಜನೆ
ಶ್ರೀ ಗುರುರಾಯರ 916 ನೇ ಭಜನೆ ಇರುಳಲ್ಲಿ ಮರುಳಲ್ಲಿ ನಡೆಯುತ ಸೋತು ಸುಣ್ಣಾಗಿರುವೆ ಪ್ರಭುವೆ ಕೈಹಿಡಿದೆನ್ನ ಮುನ್ನಡೆಸುವ ತಂದೆ ನೀ ಕಾಣದೆ ಬೆಂದು ಹೋಗಿರುವೆ. |ಪ| ಕಾಲಚಕ್ರದ ಸೆಳೆವಲಿ ಸಿಲುಕಿರುವ ಬದುಕಿನ ಪರಿ ನೀನರಿಯೆಯೇನು ಎನ್ನ ನರಳುವ ಬದುಕಿನ ನೋಟ ನಿನ್ನ ಕಣ್ಣಿಗೆ ಪ್ರಭುವೆ ಕಾಣದೇನು. |1| ಒಮ್ಮೊಮ್ಮೆ ಮಿಂಚು ಗುಡುಗಿನಲಿ ಬದುಕೇ ನಡುಗಿ ಹೋಗಿದೆಯಲ್ಲ ಅದನೆದುರಿಸುವ ಧೈರ್ಯ ಸಾಲದೆ ನಿನ್ನ ಮೊರೆಹೋದೆ ಪೊರೆವೆಯಲ್ಲ. |2| ಕೈಕಾಲು ಧೃಢತೆಯನೇ ಕಳೆದಂತೆ ಎನ್ನ ಎದೆಯಲ್ಲಿ ನಡುಕ ಹುಟ್ಟಿಸಿದೆ ನನ್ನೆದೆಯ ವೃಂದಾವನಕೆ ತಂದೆಯೆ ನೀನು ಬರುವ ಹಾದಿಯನೇ ಕಾಯ್ದೆ. |3| ಒಂದೊಂದು ಕ್ಷಣದಲ್ಲಿ ತುಂಬಿರುವ ನೋವಿನ ಪರಿಯನು ಸಹಿಸದಾದೆ ಪ್ರಭು ರಾಘವೇಂದ್ರ ನಿನ್ನನು ಬಿಟ್ಟು ಇನ್ನಾರನೂ ನಾನೀಗ ನಂಬದಾದೆ. |4| ರಚನೆ ಅಚ್ಯುತ ಕುಲಕರ್ಣಿ